27 Aug 2013

ದೀಪ ಹಚ್ಚುವ ಹೊತ್ತಾಗಿದೆ

ಮನದ ಬಾಗಿಲಿಗೆ 
ತೋರಣ ಪೋಣಿಸುವ ಹೊತ್ತಲ್ಲೇ
ಇಟ್ಟ ರಂಗವಲ್ಲಿಯ ಮೇಲೆ
ಕೊಳ್ಳಿ ಉರಿಯತೊಡಗಿದೆ..

ಬಸಿದಿಟ್ಟ ಮಲ್ಲಿಗೆಯನ್ನ
ಅವಲಾಗಿದೆ..ಹೂರಣವೂ ಹಳಸಿ..
ಘಮಲೆಲ್ಲ ಕರಗಿ, 
ಬರೀ ಕಮಟು ಕಮಟು..

ನೆನ್ನಿದ್ದವ ಇಂದಿಲ್ಲ..
ಅವನೀಥರ ಹೊರಹೋಗಿಬರುವುದು
ಇದೇ ಮೊದಲಲ್ಲ..
ಮರಳಿ ಬಂದಾಗಲೆಲ್ಲ
ಮತ್ತೆ ಕೊಯ್ದು ತರುತ್ತಿದ್ದೆ..,
ಮಲ್ಲಿಗೆಯನು ಮುಡಿಯಲು-ಹಾಸಲು..
ನಾನೇ ಮಣಿಸಿದರೂ
ಮಣಿದಂತೆ ನಟಿಸುತ್ತಿದ್ದೆ..
ಮರಳಿ ಅಂಗಳಕ್ಕೆ ಕರೆತರಲು..

ಈ ಬಾರಿ ಅವನು ನಡೆದಿದ್ದಾನೆ
ಸಾಕಾಗಿದೆ ನನಗೂ
ನಾ ಹೇಳುವ ಮೊದಲೇ
ಕೈಗಳು ಅಳಿಗೆ ಹಾಕಿವೆ..

ಮೊದಲ ಕೆಲಸವೇ
ಜೇಡನ ಹೊಸಕಿ..
ಗುಡಿಸೊರಸಿ
ಮಿಂದೆದ್ದು
ದೀಪವ ಹಚ್ಚುವುದು..

ಬಾಳು

ಇಷ್ಟಕ್ಕೆಲ್ಲಾ ಹರಿಯಬೇಕೇ ಬಂಧ
ಎಂದರದೆ ಬಾಳು..
ಇಷ್ಟೆಲ್ಲಾ ಸಹಿಸಬೇಕೇ
ಎಂದರಲ್ಲಿಂದಲೇ ಶುರು ಸೀ...ಳು..

ಛೇ..

ಸುಖಾಸುಮ್ಮನೆ
ತುಟಿ ಅದುರುತ್ತದೆ..
ಛೇ..
ಬಂದೀಯ ಜೋಕೆ 
ಇನ್ನೊಮ್ಮೆ ಕನಸಿಗೆ
ಹೇಳಿಟ್ಟಿದ್ದೀನಿ ಮತ್ತೆ..



ರಾಜಿ

ಭಯಂಕರ ಹಸಿವಾಗಿದೆ.. ಎದುರಿಗೇ ದರ್ಶಿನಿಯೊಂದರ ದರ್ಶನವಾಗಿದೆ.. ಹೊಕ್ಕಿಬಿಡಲೇ ಒಳಗೆ? ಒಬ್ಬಳೇ ನಿಂತು ಒಂದೇ ಒಂದು ಇಡ್ಲಿಯನ್ನು ತಿಂದುಮುಗಿಸುವಷ್ಟರಲ್ಲಿ ಹತ್ತು ಕಣ್ಣುಗಳು ನನ್ನನ್ನು ತಿಂದುಬಿಡುತ್ತವೆ.. ಬೇಡಪ್ಪಾ..ಅದಕ್ಕಿಂತ ಹಸಿವೆಯೇ ವಾಸಿ..
ನಾಲ್ಕು ತಿಂಗಳ ಬಸುರಿ ಎನ್ನಬಹುದು.. ಆ ಪಾಟಿ ಹೊಟ್ಟೆ ಉಬ್ಬಿದೆ.. ಬಿಸಿಲ ಧಗೆಗೆ ಬ್ಯಾಗಲ್ಲಿದ್ದ ಬಾಟಲಿ ನೀರೆಲ್ಲ ಹೊಟ್ಟೆಸೇರಿದೆ. ಬೆಳಿಗ್ಗೆ ಮನೆ ಬಿಡುವ ಮುಂಚೆ ಹೋಗಿದ್ದು.. ಮಧ್ಯಾಹ್ನವಾಯಿತು. ಈ ಬಿಸಿಲಲ್ಲಿ ‘ನಿರ್ಮಲ’ (!) ಶೌಚಾಲಯವನ್ನು ಎಲ್ಲಂಥ ಹುಡುಕಲಿ..? ಈ ರಸ್ತೆಯಲ್ಲಿ ಯಾರೂ ಇಲ್ಲ. ಸುತ್ತಮುತ್ತ ಬರೀ ಗಿಡಮರ. ಮರೆಯಲ್ಲಿ ಹೋಗಿಬಿಡಲೇ..? ಬೇಡಪ್ಪಾ.. ಯಾವ ಗ್ರಹಚಾರ.. ಇನ್ನೊಂದು ಗಂಟೆ ತಡೆದುಕೊಂಡು ಬಿಟ್ಟರೆ ಮನೆಯಲ್ಲೇ ಹೋಗಬಹುದು.
ಆ ಮೆಡಿಕಲ್ಸ್ ಸ್ಟೋರಿನಲ್ಲಿ ತುಂಬಿದ್ದ ಜನ ಖಾಲಿಯಾದರೇ ನೋಡಬೇಕು. ಸ್ಯಾನಿಟರಿ ಪ್ಯಾಡು ಬೇಕಂತ ಅಂಗಡಿಯವನ್ನ ಕೇಳೋಕೇ ಕಷ್ಟ. ಇನ್ನು, ಜನ ಇದ್ದಾಗ್ಲಾ..? ಅಯ್ಯಯ್ಯಪ್ಪಾ.. ಸಾಧ್ಯವೇ ಇಲ್ಲ.
ಹೊಸ ಸಿನಿಮಾ ರಿಲೀಸ್ ಆಗಿದೆ.. ಪುನೀತ್ ದು. ಆಸೆ ಅಗ್ತಿದೆ. ಹೆಂಗೂ ಇಲ್ಲೇ ಪಕ್ಕದಲ್ಲೇ ಥೇಟರ್ ಇದೆ. ನಂಗೆ ಟೈಮೂ ಇದೆ. ಹೋಗಿ ನೋಡಿಬಿಡಲೇ..? ಸಿನಿಮಾಕ್ಕೆ ಹೋಗೋದಾ.. ಅದೂ ಒಬ್ಬಳೇ..? ಎಷ್ಟು ರೇಟು ಅಂತಾರಷ್ಟೇ.. ಬೇಡಪ್ಪಾ..
ಹೀಗೆ ನಾವು ಎಷ್ಟಂತ ನಮ್ಮ ಕಂಫರ್ಟ್ ಗಳ, ಅವಶ್ಯಕತೆಗಳ, ಆಸೆಗಳ ಜೊತೆ ರಾಜಿ ಮಾಡ್ಕೊಳ್ಳೋದು ಹೇಳಿ..?

ಪಾರಿಜಾತ

ಪ್ರೇಮಪಾರಿಜಾತ
ತಂತಾನೇ ಉದುರಬೇಕು..
ಆಯುವಾಗಿನ ಸುಖ
ಕಿತ್ತರೆ ಬಾರದು..

22 Aug 2013

ದೊರೆಯೇ...

ರಾಜ್ಯಾವ ಬೇಡೆನು
ಆಳುಕಾಳೊಲ್ಲೇನು
ರಾಗಿಯ ತಾ ಎನನಗೆಗೆ
ಅದೆ ಸಾಕು ನನ ದೊರೆಯೇ...

ಬಾಳೆಯ ಹಣ್ಣಂಗೆ
ತಿರುವೇನು ಹಿಟ್ಟ
ಗಂಟಿಲ್ಲದ ಬಾಳ್ವೇಯ
ಮಾಡೋಣು ಬಾ ದೊರೆಯೇ...

ಅತಿಸಣ್ಣ ಕತೆ - 3

ಅವನಿಗೆ ಅವಳಂದರೆ ವಿಪರೀತ ಮೋಹ. ಯಾವಾಗಲೂ ಹೇಳುತ್ತಲೇ ಇದ್ದ , 'ನಾನು ಸತ್ತೋಗುವಷ್ಟು ನಿನ್ನನ್ನ ಪ್ರೀತಿಸ್ತೀನಿ' ಅಂತ. ಒಂದಿನ ಅವಳು ಇವನ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು.

ಬಟ್ಟೆ - ದಾರ - ಸೂಜಿ

ಕತ್ತಲೆ ಕೂಪದಲ್ಲಿರುವ ಮಂಡೂಕವಾಗಬಾರ್ದು ನಾವು...

ನಾವು ಹೊಲ್ಯೋ ಬಟ್ಟೆಗೆ
ಸಾವಿರಾರು ಬೆಲೆಯು;
ಆದ್ರೆ ನಮ್ಗೆ ಯಾಕಿಲ್ಲ 
ಬಿಡುಗಾಸಿನ ಕಿಮ್ಮತ್ತು?

ಬೆವರನ್ನ ಒರ್ಸೋಕೆ ಒಂದ್ನಿಮ್ಷ ಟೈಮಿಲ್ಲ;
ನಮ್ಮಯ ಬೆವರು ಅವರೀಗೆ ಸೆಂಟು!

ನಾಜೂಕಾಗಿ ಕಾಲರ್ರು ಹೊಲ್ಯೋರು ನಾವು;
ಟೈಕಟ್ಟಿ ಮೆರೆಯೋರು ಅವರು!

ಬಟ್ಟೆಗೆ ಜೇಬನ್ನು ಹೊಲೆಯೋರು ನಾವು
ಕಂತೆಕಂತೆ ನೋಟು
ತುರುಕೋರು ಅವರು!

ಹೊಲೆಯುವ ಕೈಯಿ ಕಟ್ಟಿದರೆ ಸುಮ್ಮನೆ
ಬಟ್ಟೆ ದಾರ ಸೂಜಿ
ಇಟ್ಕೊಂಡೇನು ಮಾಡ್ತಾರೆ!!?

(ಗಾರ್ಮೆಂಟ್ ಮಹಿಳಾ ಕಾರ್ಮಿಕರ ಜಾಗೃತಿಗಾಗಿ ರಚಿಸಿದ್ದು- ೨೦೦೭)

ಮಾತನಾಡಕ್ಕಯ್ಯ..

ಮಾತನಾಡಕ್ಕಯ್ಯ.. ಮಾತನಾಡು
ನಿನ್ನ ಹಕ್ಕಿಗಾಗಿ ದನಿ ಎತ್ತಿ ಮಾತನಾಡು

ಗಿರಿಜಕ್ಕ ವನಜಕ್ಕ ಮಾತನಾಡು
ಹಸೀನಾ ಶಬಾನಾ ಮಾತನಾಡು
ಕಮಲಮ್ಮ ಶಾಂತಮ್ಮ ಮಾತನಾಡು
ಮೇರಿಯಮ್ಮ ಲಿಲ್ಲಿಯಮ್ಮ ಮಾತನಾಡು

ದುಡಿಯುವ ಕೈಗಳಲ್ಲಿ ಮಾತನಾಡು
ಹರಿಯುವ ಬೆವರಲ್ಲಿ ಮಾತನಾಡು
ಕುದಿಯುವ ನೆತ್ತರಲ್ಲಿ ಮಾತನಾಡು
ಮಿಂಚುವ ಕಣ್ಗಳಲ್ಲಿ ಮಾತನಾಡು

ಶತಮಾನದ ನಿರ್ಲಕ್ಷ್ಯಕೆ ಮಾತನಾಡು
ಪ್ರತಿಫಲವ ಆಗ್ರಹಿಸಿ ಮಾತನಾಡು
ಕೆಚ್ಚೆದೆಯ ಹೃದಯದಿಂದ ಮಾತನಾಡು
ಗತ್ತಿನಿಂದ ತಲೆಯತ್ತಿ ಮಾತನಾಡು

ಅಕ್ಕತಂಗಿ ಗೆಳತಿರಲ್ಲಿ ಮಾತನಾಡು
ಕಾನೂನು ಅರಿತುಕೊಂಡು ಮಾತನಾಡು
ಕೈಗೆ ಕೈಯಿ ಬೆಸೆಯುವಂತ ಮಾತನಾಡು
ಕಣ್ಣೀರ ಒರೆಸುವಂತ ಮಾತನಾಡು
ಸಂವಿಧಿಾನ ಗೊತ್ತೆಂದು ಮಾತನಾಡು
ಸಂಘಟನೆಯು ಹಕ್ಕೆಂದು ಮಾತನಾಡು
ಮುನ್ನಡೆಯು ನಮ್ಮದೆಂದು ಮಾತನಾಡು
ಹೋರಾಟಕ್ಕೆ ಸಿದ್ಧರೆಂದು ಕೂಗಿಹೇಳು!!!

(ಮಹಿಳಾ ಕಾರ್ಮಿಕ ಜಾಗೃತಿಗಾಗಿ ರಚಿಸಿದ್ದು, 2008)
ಮುನಿದ ಚಳಿ ರಾತ್ರಿಗಳಲ್ಲಿ
ಸಂಧಾನಕಾರ
ತುಂಡು ಹೊದಿಕೆ!

ಪ್ರೀತಿ

ನಾನು ನಿನ್ನನ್ನು
ಅತ್ಯುತ್ಕಟವಾಗಿ 
ಪ್ರೀತಿಸುತ್ತೇನೆ..
ಎಷ್ಟೆಂದರೆ...,
ನಿನಗೆ ಹಸಿವೆನ್ನುವುದು
ಮರೆತೇಹೋಗಬೇಕು!

ಅತಿಸಣ್ಣಕತೆ -2

ಅ ಕವಿಮಹಾಷಯ ತನ್ನ ಅನಕ್ಷರಸ್ಥ ಪತ್ನಿಯನ್ನು ತನ್ನ ಕಾವ್ಯದಲ್ಲಿ ಪ್ರೀತಿಸಿ, ರಮಿಸಿ, ಓಲೈಸಿ, ಆರಾಧಿಸುತ್ತಿದ್ದ.
ಅವನ ನಿರ್ಲಕ್ಷ್ಯಕ್ಕೆ ಬೇಸತ್ತ ಪತ್ನಿ ಕೊರಗಿ ಕೊರಗೀ ಸತ್ತಳು!!
ನನ್ನ ಕಣ್ಣು, ಕಿವಿ, ಬಾಯಿ 
ನಿಷ್ಕ್ರಿಯಗೊಳಿಸಿದ ಮೇಲೂ
ನಾ ನೋಡಬಲ್ಲೆ, ಕೇಳಬಲ್ಲೆ, ಹಾಡಲೂಬಲ್ಲೆ..
ಅದ ಸವಿಯಲು ನಿನ್ನ
ಇಂದ್ರಿಯಗಳು
ಬದುಕಿರಬೇಕಷ್ಟೇ.

ಅತಿಸಣ್ಣ ಕತೆ - 1

ದೇಹ ಅರ್ಧ ಸುಟ್ಟಿತ್ತು. ಕಟ್ಟಿಗೆಗಳು ಮಾತನಾಡಿಕೊಂಡವು. 
ಇವನಂತೂ ಸತ್ತ ನಾಲ್ಕು ಜನರಿಗಾಗದೇ..
ನಮ್ಮನ್ನಾದರೂ ಬಿಡಲಿಲ್ಲ, ನಾಲ್ಕು ಮನೆ ಒಲೆ ಉರಿಸಲು...

ಬಿಂಕ

ಬಿಂಕ ಸ್ವತಃ ನನಗೂ
ಇಷ್ಟವಿಲ್ಲ..
ಅದೇನಿದ್ದರೂ
ಕುಡಿಮೀಸೆಯಂಚಿನ
ನಿನ್ನ
ನಗುವಿಗಾಗಿ...

ಹೊಕ್ಕಳ ಹಳೆನೋವಿಗೆ ಒಳಗೆ ಬೇಯುತ್ತಾ..

ಪ್ಯಾಂಟಿನೊಳಕ್ಕೆ ಕಾಲತೂರಿಸಿ
ಬಕಲ್ಲು ಬಿಗಿದು
ಕ್ರಾಪು ತೀಡಿ
ಹೆಚ್ಚೆಂದರೆ ಮುಖಕ್ಕೆ ನಾಕು ಹನಿ ನೀರು
ಯಾರಾದರೂ ಹೇಳಬಲ್ಲರೇ
ಏನೋ ನಡೆದಿರಬಹುದೆಂದು
ನಿನ್ನ ಕಂಡು..?

ತಲೆಯಿಂದ ಮಿಂದೆದ್ದು
ಪಿನ್ನು, ಬಾಚಣಿಗೆ, ಪೌಡರು, ಕ್ರೀಮು
ಉಟ್ಟಸೀರೆಯ ಒಪ್ಪಮಾಡಿ
ಏನಮಾಡಿದರೇನು
ಮರೆಸದಾದೆ ನಾನು
ನುಡಿಯುವುದು ನನ್ನ ಇರುವಿಕೆಯೇ ಸಾಕ್ಷಿ!

ಹೇಳಿಬಿಟ್ಟೆ ನೀನು
ಈಗ ಕಷ್ಟವಲ್ಲವಲ್ಲವಂತೆ
ಮಾತ್ರೆಯಲೇ ಕರಗಿಸಿಬಿಡುತ್ತಾರೆ..
ನಿನಗೇನೋ ಗೊತ್ತು
ಬಳೆಶಾಪಿನಿಂದ ಕೊಂಡ ಕರಿಮಣಿ ಸರ
ನನ್ನ ಮಾನ ಉಳಿಸಿದೆ ಎಂದು..?
ಪಕ್ಕದಲಿ ಕೂತ ಮೂರುತಿಂಗಳ ಹಸಿಬಾಣಂತಿ ಕೇಳುತಾಳೆ
ಏನಾಗಿದೆ ನಿಮಗೆ.. ಚೆಕ್ಅಪ್ಪಿಗಾ..?
ಚೆಕ್ಅಪ್ ಮಾಡಲೇನೂ ಉಳಿದಿಲ್ಲ
ಇದ್ದದ್ದ ಬಸಿದುಬಿಡಲು ಬಂದಿದ್ದೇನೆಂದು
ಹೇಗೋ ಹೇಳಲಿ ನಾನವಳಿಗೆ

ಆಸ್ಪತ್ರೆಗೆ ಸೇರಿದರೆ
ಜನಬಂದು ನೋಡುತ್ತಾರೆ..
ಹಣ್ಣು-ಬೊಕ್ಕೆ ತರುತ್ತಾರೆ
ಆಸೆಯಾಗುತ್ತದೆ ಪಕ್ಕದ ಬೆಡ್ಡಿನವರ ಕಂಡು
ಸಧ್ಯ ಆಸೆ ಒತ್ತಟ್ಟಿಗಿರಲಿ
ಪೀಡೆಕಳೆದರೆ ಸಾಕು
ಎನ್ನುವ ನಿನ್ನ ಬೆಂಕಿ ಉಗುಳುವ ಕಣ್ಣು
ನೆನಪಿಸಿದವು ಅಂದು ರಮಿಸಿದವ ಇವನಾ..?

ದೇಹದ ಗಾಯ ಮಾಯೀತು
ಮತ್ತೆ ಹೂವು ಅರಳೀತು
ನಾನೂ ನಕ್ಕೇನು
ಮುಂದೊಂದು ದಿನ
ಹೊಕ್ಕಳ ಹಳೆನೋವಿಗೆ ಒಳಗೆ ಬೇಯುತ್ತಾ..

18 Aug 2013

ಕನ್ನಡಿ

ಕನ್ನಡಿ ಒಡೆದು
ಚೂರಾಗಿದೆ ನೂರು..
ಅಯ್ಯಯ್ಯೋ ಎನ್ನಲಾರೆ..
ಚಿಂತಿಲ್ಲ..
ಈಗ ಶಕ್ತಿ 
ಸಾವಿರವಾಗಿ ಹೊಳೆದಿದೆ..

ಕಣ್ಣೀರು

ತಲೆ ಇನ್ನೂ ಕೊಂಚ ತಗ್ಗಿಸು
ಜಗತ್ತು ತೆರೆದುಬಿಟ್ಟೀತು ನಿನ್ನೆದುರು..
ಭುಜ ಹಿಗ್ಗಿಸಿ ನಗಬೇಡ ಚೆಲ್ಲು ಚೆಲ್ಲಾಗಿ..
ಮುದುಡಿಹೋಗಲಿ ಸ್ತನ-ಮನದ ಜೊತೆಗೆ..
ತೀರಾ ಉದ್ದದ ಜಡೆಯೂ ಸೆಳೆದೀತು ಕಣ್ಣ
ನಿತಂಬದ ಕಡೆಗೆ..ಕತ್ತರಿಸಿಬಿಡು..
ಜೊತೆಗೆ ಆಸೆಗಳನ್ನಾ..
ತುಂಡುಡುಗೆ ಬೇಡವೇ ಬೇಡ..
ಸೀರೆಯೇ ಸರಿ.. ಕಣ್ಣೀರೊರೆಸಲು..

.....

ಹೂ ತಂತಾನೇ ಅರಳಲಿ .. 
ಮುಗಿಲು ತಂತಾನೇ ಸುರಿಯಲಿ..
ಹಕ್ಕಿ ತಂತಾನೇ ಹಾರಲಿ..
ಕಾಯುವುದು ಕಷ್ಟವಾದರೆ..,
ಕಾಯುವುದ ಬಿಟ್ಟುಬಿಡು.
ಜಗತ್ತು ನನ್ನನ್ನು 
ತಿರಸ್ಕರಿಸಿದಾಗ 
ನೀನು
ಖೇದಗೊಳ್ಳುತ್ತೀಯಲ್ಲ..
ಅದು ನನ್ನನ್ನು 
ಬದುಕಿಸಿಬಿಡುತ್ತೆ!!

ನಗುವ ಮಂದಿ

ಬಾಲೆ ಲಂಗಕ್ಕಂಟಿದ
ರಕುತದ ಕೆಂಪುಕಲೆಯ ಕಂಡು..,
ತಾಯೊಬ್ಬಳ ಮೊಗ್ಗುಮೊಲೆಗಳಿಂದ
ಒಸರಿದ ತಿಳಿಹಾಲಿನ ಒದ್ದೆರವಿಕೆಯ ಕಂಡು..
ಕಿಸಕ್ಕನೆ ನಗುವ ಈ ಮಂದಿ..

ನಾ ಎಣಿಸುತ್ತೇನೆ..
ಓಹೋ.. ಇವರು 
ಒಂದೋ ರಕುತ ಸೋಕಿಸದೆ ಯೋನಿಯಿಂದ
ದುತ್ತನೆ ನೆಲಕ್ಕೆ ಉದುರಿರಬೇಕು!

ಮೊಲೆತೊಟ್ಟು ತಾಕಿಸದೇ
ಗಂಟಲಿಗೆ ಹಾಲ ಚಿಮ್ಮಿಸಿರಬೇಕು!!
ಇಲ್ಲವೇ.........

ಪ್ರೀತಿ ಇಲ್ಲದ ಮೇಲೆ..

ಪ್ರೀತಿ ಹೊರೆಯಾದಂತೆಲ್ಲಾ
ಬೆಸೆದಿದ್ದ ಕಿರುಬೆರಳ ನಡುವೆ 
ಬೆವರೇಳುತ್ತದೆ..
ಚುಂಬಿಸಿದ್ದ ಅಧರಗಳು
ಒಣಗುತ್ತದೆ..
ಕಚಗುಳಿಯಿಟ್ಟಿದ್ದ ಪಾದಗಳು
ಬಿರುಕುಬಿಡುತ್ತದೆ..
ಬಾಯಿ ನಾರುತ್ತದೆ..

ಉಗುರು ಚುಚ್ಚುತ್ತದೆ..
ಗಡ್ಡ ಪರಚುತ್ತದೆ..
ರಾತ್ರಿಯಲಿ ಸೆಖೆಯಾಗುತ್ತದೆ..!!

ವಸಂತ

ಮುಳ್ಳ ಬೇಲಿಯ
ಜಿಗಿದು
ಬಂದನೆದೆಗೆ
ಕಳ್ಳ ವಸಂತ..
ಹೂ ಅರಳಿಸಿಯೇ ಬಿಟ್ಟ 
ದಾರಿಗುಂಟ..

ಗಂಡೆದೆ

ಅಲ್ಲೊಂದಿನಿತು ನವಿರು
ರೋಮದ ಮುರುಮುರು..
ಲಯಬದ್ಧ ಏರಿಳಿತ..
ಶಾಖವೋ ಆಪ್ಯಾಯಮಾನ..
ನಾ ಎತ್ತರವಿರದುದೇ ಸುಖ,
ನಿನ್ನ ಗಂಡೆದೆಯ ತಬ್ಬಲು..

ಬಲು ದೇಸೀ ನನ್ನವನು

ಹತ್ತಿರ ಬರಲಾರ ತಾನಾಗಿ..
ಹಿಡಿಯಬೇಕು ಮುಷ್ಠಿಯಲಿ ಬಿಗಿಯಾಗಿ..
ಹಿಡಿದು ತಡವಬೇಕೆನ್ನ ಮೈಯ್ಯ..
ಅಂಗಾಗ ಸವರುತ್ತಾ.. 
ಕೈ ಜಾರುವನು.. ಬಿಗಿ ತಪ್ಪುವನು..
ಅಂಗಾತ ಬೀಳುವನು 
ಕೊಂಚ ತೇವವಿರೆ ಸಾಕು
ಮೈಯೆಲ್ಲಾ.. ನೊರೆಯಾಗಿ ಉಕ್ಕುವನು..
ಬಲು ದೇಸೀ ನನ್ನವನು..
ಇಂದೇ ಬಳಸಿರಿ “ಕುಟೀರ್ ಸಾಬೂನು”

ಖಾದಿ ಗ್ರಾಮೋದ್ಯಮದ ಒಂದು ಉತ್ಪನ್ನ!!!