13 Apr 2015

ಗಾರ್ಮೆಂಟ್ ಕಾರ್ಮಿಕರ ಬದುಕು-ಬವಣೆ (3)


ಆಕೆ ಮೈಸೂರು ರಸ್ತೆಯ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಟೈಲರ್ ಆಗಿ ದುಡಿಯುತ್ತಿರುವ 38 ವಯಸ್ಸಿನ ಮಹಿಳೆ. ಇಲ್ಲಿ ಕಳೆದ 3 ವರ್ಷಗಳಿಂದ ದುಡಿಯುತ್ತಿದ್ದಾಳೆ. ಗಾರ್ಮೆಂಟ್ಸ್ ಉದ್ಯಮದಲ್ಲಿ ಆಕೆಗಿರುವ ಒಟ್ಟಾರೆ ಅನುಭವ ಹನ್ನೊಂದು ವರ್ಷಗಳದ್ದು. ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಈಕೆ, ಅದೇ ಕಾರಣಕ್ಕೆ ಹಿಂದಿನ ಕಾರ್ಖಾನೆಯಲ್ಲಿ ಫ್ಲೂರ್ ಇಂಜಿನಿಯರ್ನಿಂದ ಶೋಷಣೆಗೆ ಗುರಿಯಾಗಿ, ಸಂಜೆವರೆಗೆ ಕಾರ್ಖಾನೆಯ ಕೊಠಡಿಯೊಂದರಲ್ಲಿ ಗೃಹಬಂಧನದಲ್ಲಿರಬೇಕಾಯಿತು. ಆ ಘಟನೆಯ ವಿರುದ್ಧ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದ ಆ ಹೆಣ್ಣುಮಗಳು ಈಗ 4 ವರ್ಷಗಳ ನಂತರ ಅದೇ ಫ್ಲೂರ್ ಇಂಜಿನಿಯರ್ ನನ್ನು ಕಟಕಟೆಗೆ ತಂದು ನಿಲ್ಲಿಸಿರುವುದು ದೊಡ್ಡ ಸಾಧನೆಯೇ ಸರಿ. ಇದಿಷ್ಟೂ ಆಕೆಯ ಕಾರ್ಮಿಕ ಬದುಕಿನ ಚಿತ್ರಣ. ಆದರೆ ಈಗ ಹೇಳಹೊರಟಿರುವ ಘಟನೆ ಅದಲ್ಲ.

ಇದೇ ಹೆಣ್ಣುಮಗಳ ಬದುಕಿನ ಇನ್ನೊಂದು ಘೋರ ಕಥನ ಇದು. ಮಂಡ್ಯ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಯೊಂದರಲ್ಲಿ ಈಕೆಯ ಕುಟುಂಬದ ವಾಸ. ಗಂಡ, 3 ಗಂಡು ಮಕ್ಕಳ ಸಂಸಾರ. ಹಿರಿಯ ಮಗನಿಗೆ ಹೃದಯದಲ್ಲಿ ಸಮಸ್ಯೆ. ಕೃಷಿ ಆದಾಯದಲ್ಲಿ ಔಷದೋಪಚಾರ, ಮಕ್ಕಳ ಓದು, ಕುಟುಂಬ ನಿರ್ವಹಣೆ ಅಸಾಧ್ಯವೆನಿಸಿದಾಗ ಆಕೆ ಬೆಂಗಳೂರಿನ ಗಾರ್ಮೆಂಟ್ಸ್ತ್ತ ಮುಖ ಮಾಡಿದಳು. ಆದರೆ ನಗರದ ದುಸ್ತರ ಬದುಕಿನ ಅರಿವಿದ್ದುದರಿಂದ ಕುಟುಂಬದ ಉಳಿದ ಸದಸ್ಯರು ಹಳ್ಳಿಯಲ್ಲೇ ನೆಲೆಸಲು ತಿರ್ಮನಿಸಿದರು. ಈಕೆ ಮಾತ್ರ ಕಾರ್ಖಾನೆಗೆ ಹತ್ತಿರವಿದ್ದ ಏರಿಯಾದಲ್ಲಿ ಕೋಣೆಯೊಂದನ್ನು ಬಾಡಿಗೆಗೆ ಪಡೆದು, ದುಡಿಯಲು ತೊಡಗಿದಳು. ಆಕೆಯ ವೇಳಾಪಟ್ಟಿ ಎಷ್ಟು ಖಚಿತವಿತ್ತೆಂದರೆ, ವಾರದ ಆರು ದಿನ ದುಡಿಮೆ. ಪ್ರತೀ ದಿನ ಸಂಜೆ ಕಾರ್ಖಾನೆಯಿಂದ ಮನೆ ತಲುಪುವ ಮೊದಲು ಕಾರ್ಮಿಕ ಸಂಘಟನೆಯ ಕಛೇರಿಗೆ ಭೇಟಿ, ನಂತರ ಮನೆ ಸೇರುವುದು. ಆದರೆ ಪ್ರತಿ ಶನಿವಾರ ಮಾತ್ರ ಆಕೆ ಊರಿಗೆ ಹೊರಟು ಬಿಡುತ್ತಿದ್ದಳು. ರಾತ್ರಿ ಊರನ್ನು ತಲುಪಿ, ಭಾನುವಾರ ಮಕ್ಕಳ ಯೋಗ ಕ್ಷೇಮ ನೋಡಿಕೊಳ್ಳುವುದು, ಕೃಷಿ ಚಟುವಟಿಕೆಗೆ ಹೆಗಲಾಗುವುದು, ಮನೆಯವರ ಬಟ್ಟೆಬರೆ ಒಗೆಯುವುದು, ಅಡಿಗೆ ಮಾಡಿ ಬಡಿಸಿ, ಸಂಜೆ ಮತ್ತೆ ಬೆಂಗಳೂರಿಗೆ ಬಸ್ಸು ಹಿಡಿಯುವುದು ಆಕೆಯ ಮಾಮೂಲಿ ಚಟುವಟಿಕೆಯಾಗಿತ್ತು. ಭಾನುವಾರ ಫಾಕ್ಟೊರ್ಯಲ್ಲಿ ಓ.ಟಿ ಇದ್ದರೆ, ಮಾಡುವುದಿಲ್ಲವೆಂದು ವಾದಕ್ಕೆ ನಿಲ್ಲುತ್ತಿದ್ದಳು. ಒತ್ತಡ ಹೆಚ್ಚಿದ್ದರೆ, ಇನ್ನೊಂದು ದಿನ ರಜೆ ಇದೆಯೇ ಎಂದು ಖಚಿತಪಡಿಸಿಕೊಂಡು ಕೆಲಸಕ್ಕೆ ಕೂರುತ್ತಿದ್ದಳು. ಆಕೆಯ ಅನಿರ್ವಾಯತೆ ಅಷ್ಟಿತ್ತು.
ಆದರೆ.. ಅದೊಂದು ಭಾನುವಾರ ಆಕೆ ಊರಿನಿಂದ ಹೊರಟು ಬರುವುದು ತಡವಾಗಿತ್ತು. ಬೆಂಗಳೂರು ತಲುಪಿದಾಗ ರಾತ್ರಿ 11.30ರ ಸಮಯ. ಬಸ್ಸ್ಟಾಂಡಿನಿಂದ ಕೇವಲ 200 ಮೀಟರ್ ಅಂತರದಲ್ಲಿರುವ ತನ್ನ ಮನೆಗೆ ನಡೆದು ಹೋಗುತ್ತಿರುವಾಗ, 20-21 ವಯಸ್ಸಿನ ಮೂವರು ಯುವಕರು ಆಕೆಗೆ ಚಾಕು ತೋರಿಸಿ, ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಎಳೆದೊಯ್ದು, ಸರಿರಾತ್ರಿ 2 ಗಂಟೆಯವರೆಗೆ ಬಲವಂತ ಸಂಭೋಗ ನಡೆಸಿದ್ದಾರೆ. ನಂತರ ತಮ್ಮ ಸುಳಿವು ನೀಡಬಹುದೆಂದು ಕೊಲ್ಲುವ ಸಂಚು ನಡೆಸುತ್ತಿದ್ದಾಗ, ಆಕೆ ಕಿರುಚಿಕೊಳ್ಳಲಾಗಿ, ಎಲ್ಲರೂ ಹೆದರಿ ಓಡಿಹೋಗಿದ್ದಾರೆ. ಅಂಥಹ ಆಘಾತದಲ್ಲೂ ಆಕೆ, ನೇರವಾಗಿ ನಡೆದದ್ದು ಹತ್ತಿರದ ಪೋಲಿಸ್ ಠಾಣೆಗೆ. ಅದೃಷ್ಠವಶಾತ್, ತಕ್ಷಣ ಕರ್ಯೋನ್ಮುಖರದ ಪೋಲಿಸರು ಮಾರನೆಯ ಬೆಳಗು ಹರಿಯುವಷ್ಟರಲ್ಲಿ ಅಪರಾಧಿಗಳನ್ನು ಬಂಧಿಸಿದ್ದರು.
ಆದರೆ, ಆಕೆ..? ತನ್ನ ಮೈಮೇಲಿನ ಗಾಯ ಆರುವಷ್ಟೇ ವೇಗವಾಗಿ ಮಾನಸಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವೇ..? ಆಕೆಗೆ ಪರ್ಯಾಯ ಮಾರ್ಗವಿಲ್ಲ. ದುರ್ಮರ್ಗಿ ಹಾಗೂ ಆತ್ಯಾಚಾರಿ ಯುವಕರ ಕೃತ್ಯಕ್ಕೆ ಕೊರಗುತ್ತಾ ಕೂತರೆ, ತನ್ನ ಮಕ್ಕಳ ಭವಿಷ್ಯ ಮರುಟಿ ಹೋಗುತ್ತದೆ. ಕಾರ್ಖಾನೆಗೆ ರಜೆ ಹಾಕಿದರೆ ಸಂಬಳ, ಅಟೆಂಡೆನ್ಸ್ ಬೋನಸ್ಗೆ ಕತ್ತರಿ. ಕುಟುಂಬಕ್ಕೆ ಈ ಘಟನೆಯ ವಾಸನೆಯೂ ಬಡಿಯುವಂತಿಲ್ಲ. ಇತ್ತ ಮಾಧ್ಯಮಗಳು ಇಡೀ ಘಟನೆಯನ್ನು ಮರುಸೃಷ್ಠಿಸಿ, ಅತಿ ರಂಜಿಸಿ ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳಲು ಮುಂದಾಗಿವೆ. ಘಟನೆ ನಡೆದಿರುವುದು ತನ್ನ ಏರಿಯಾದಲ್ಲೇ.. ಅಕ್ಕ ಪಕ್ಕದ ಜನರ ಮಾತಿಗೆ ಉತ್ತರವಾಗಬೇಕು..
ಇವೆಲ್ಲವನ್ನೂ ಸಂಭಾಳಿಸಲು ಒಟ್ಟಾರೆಯಾಗಿ ಏನೂ ಆಗದವಳಂತೆ ನಟಿಸಬೇಕು.. ಆಕೆ ಮಾಡಿದ್ದೂ ಅದನ್ನೇ..!
ಏನೂ ಆಗದವಳಂತೆ ಎಂದಿನಂತೆ, ಎಲ್ಲರಲ್ಲೂ ಬೆರೆಯುತ್ತಾ, ತನ್ನ ದೈನಂದಿನ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ. ಘಟನೆಯ ಬಗ್ಗೆ ತಿಳಿದಿರುವ ಜನರಲ್ಲಿ ಕೆಲವರು ಮರುಗಿದರೆ, ಇನ್ನೂ ಕೆಲವರು ಪ್ರಶಂಸಿಸುತ್ತಾರೆ. ಆದರೆ ಅನೇಕರು ಕುಹಕವಾಡುತ್ತಾರೆ. ಆಗ ಆಕೆ ನಕ್ಕು ಸುಮ್ಮನಾಗುತ್ತಾಳೆ.. ಮನದಲ್ಲೇ ಕಣ್ಣೀರಾಗುತ್ತಾಳೆ.

1 comment: