13 Apr 2015

ಗಾರ್ಮೆಂಟ್ ಕಾಮಿಕರ ಬದುಕು-ಬವಣೆ (2)

ದುಡಿಯುವ ಸ್ಥಳಗಳಲ್ಲಿ ಮಕ್ಕಳ ಲಾಲನೆ-ಪಾಲನೆ

ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ 30ಕ್ಕಿಂತ ಅಧಿಕ ಮಹಿಳಯರಿದ್ದರೆ, ಅಲ್ಲಿ ಬಾಲವಾಡಿ ಇರಲೇಬೇಕೆಂದು ಕಾನೂನು ಹೇಳುತ್ತದೆ. ಆದರೆ, 500ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರರು ದುಡಿಯುವ ಕಾರ್ಖಾನೆಗಳಲ್ಲೂ ಬಾಲವಾಡಿ ವ್ಯವಸ್ಥೆ ಕಾಣಸಿಗುವುದಿಲ್ಲ. ಇದ್ದರೂ ಅದು ಸಂಪೂರ್ಣ ಅಸಮರ್ಪಕವಾಗಿರುತ್ತದೆ.
ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವಂತೆ, ಮಹಿಳಾ ಕಾರ್ಮಿಕರ ಹೆರಿಗೆ ರಜೆ 3 ತಿಂಗಳು. ಆದರೆ, ಬಾಲವಾಡಿಗೆ ಮಕ್ಕಳನ್ನು ಕರೆತರಲು ನಿಗದಿ ಮಾಡಿರುವ ವಯೋಮಿತಿ 6 ತಿಂಗಳಿಂದ 6 ವರ್ಷ. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಅನೇಕ ತಾಯಂದಿರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮಗುವಿಗೆ 6 ತಿಂಗಳಾದ ನಂತರ ಹೊಸ ನೇಮಕಾತಿ ಹೊಂದುತ್ತಾರೆ. ಇನ್ನೂ ಕೆಲವರು, ದುಡಿಯುವ ಅನಿವಾರ್ಯತೆಗಾಗಿ 3 ತಿಂಗಳ ಹಸುಗೂಸನ್ನು ನೆಂಟರಿಷ್ಟರ ಮನೆಯಲ್ಲೋ, ನೆರೆಹೊರೆಯಲ್ಲೋ ಬಿಟ್ಟು ಬರುತ್ತಾರೆ. 3 ತಿಂಗಳ ಮಗು ಬಾಲವಾಡಿಗೆ ಏಕೆ ಬೇಡ? ಏಕೆಂದರೆ, ಮಗುವಿಗೆ ಹಾಲೂಡಿಸಲು ತಾಯಿ 1-2 ಗಂಟೆಗೊಮ್ಮೆ ಎದ್ದು ಹೋದರೆ, ಪ್ರೊಡಕ್ಷನ್ ನಿಂತುಹೋಗುತ್ತದೆಂಬ ಆತಂಕ ಆಡಳಿತ ಮಂಡಳಿಯದ್ದು. 6 ವರ್ಷದ ಮಕ್ಕಳಿಗೇ ಬಾಲವಾಡಿ ಸೀಮಿತವಾದರೆ, ಶಾಲೆಯಿಂದ 4 ಗಂಟೆಗೆ ಮನೆ ತಲುಪಿ, ಬೀದಿಯಲ್ಲಿ ಆಟವಾಡುತ್ತಾ ಎಲ್ಲೋ ಬೀಳುವ-ಏಳುವ ಕಂದಮ್ಮಗಳ ಚಿಂತೆಯಲ್ಲಿ ಆ ತಾಯಂದಿರು ಹೇಗೆ ತಾನೇ ಕೆಲಸದಲ್ಲಿ ತೊಡಗಿಸಿಕೊಳ್ಳಬಲ್ಲರು.?
ಬ್ರಾಂಡುಗಳ ಸೋಷಿಯಲ್ ಆಡಿಟಿಂಗ್ನಲ್ಲಿ ಗೆದ್ದು ಬರಲು ಅನೇಕ ಕಾರ್ಖಾನೆಗಳು ಬಾಲವಾಡಿಗಳನ್ನು ತೋರಿಕೆಗೆ ವ್ಯವಸ್ಥೆ ಮಾಡಿರುತ್ತಾರಾದರೂ, ಅಲ್ಲಿಯ ದುರಾವಸ್ಥೆಗಳು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿರುವುದಿರಲಿ.. ಜೀವಕ್ಕೆ ಕುತ್ತು ತರುತ್ತವೆ. ಇದೇ 2011 ಡಿಸೆಂಬರ್ 14ರಂದು ಮೈಸೂರು ರಸ್ತೆಯ ಕಾರ್ಖಾನೆಯೊಂದರ ಬಾಲವಾಡಿಯಲ್ಲಿ 11 ತಿಂಗಳ ಹೆಣ್ಣು ಮಗುವೊಂದು ಸಾವನ್ನಪ್ಪಿದೆ. ಘಟನೆಯನ್ನು ಆಡಳಿತ ಮಂಡಳಿ ಅತ್ಯಂತ ಚಾಣಾಕ್ಷತನದಿಂದ ಮುಚ್ಚಿಹಾಕುವ ಪ್ರಯತ್ನದಲ್ಲಿದ್ದು, ದುಃಖದಲ್ಲಿದ್ದ ತಂದೆ ತಾಯಿಗಳನ್ನು ಒಳಮಾಡಿಕೊಂಡು, ತಾವೇ ಖುದ್ದು ನಿಂತು, ಮಗುವಿನ ಶವಸಂಸ್ಕಾರ ನೆರವೇರಿಸಿದ್ದಾರೆ. ಆ ಮಗುವಿನ ತಾಯಿ ಮಗು ಸಾವನ್ನಪ್ಪುವ ಕೇವಲ ಒಂದು ದಿನದ ಹಿಂದೆ ಆ ಕಾರ್ಖಾನೆಗೆ ಕೆಲಸಕ್ಕೆ ಸೇರಿದ್ದರು. ಅವರು ಘಟನೆಯನ್ನು ನೆನೆದು, ಎಲ್ಲಾ ತಮ್ಮ ದುರದೃಷ್ಟವೆಂದು ತಮ್ಮನ್ನು ತಾವೇ ಹಳಿದುಕೊಳ್ಳುತ್ತಾರೆ.
ಆದರೆ.. ಆ ಬಾಲವಾಡಿಯ ಅವ್ಯವಸ್ಥೆಗಳ ಬಗ್ಗೆ ಏನೆಂದು ಹೇಳುವುದು? ಮಕ್ಕಳನ್ನು ನೋಡಿಕೊಳ್ಳಲು ತರಬೇತಿ ಹೊಂದಿದ ಟೀಚರ್ ಮತ್ತು ಆಯಾ ಇರಬೇಕೆಂದಿದ್ದರೂ ಸಹ, ಕಾರ್ಖಾನೆಯಲ್ಲಿ ಸ್ವೀಪರ್ ಕೆಲಸ ನಿರ್ವಹಿಸುವ ಕಾರ್ಮಿಕರನ್ನೇ ಅದಕ್ಕೆ ನೇಮಿಸಲಾಗಿದೆ. ಬಾಲವಾಡಿಯ ಕೊಠಡಿಯಲ್ಲೇ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಕಾಫಿ-ಟೀ ತಯಾರಾಗುತ್ತದೆ. ಜನರೇಟರ್ ಶಬ್ದದ ನಡುವೆ, ಮಕ್ಕಳು ಪರಸ್ಪರ ಕಚ್ಚಾಡುತ್ತಾ, ಆಯಾಗಳ ಒರಟುತನದ ಮಾತಿಗೆ ಬೆದರುತ್ತಾ ಸಂಜೆ ತಾವು ಕಾಣಲಿರುವ ಅಮ್ಮಂದಿರ ಮುಖವನ್ನು ನೆನೆಯುತ್ತಾ ದಿನ ಕಳೆಯುತ್ತವೆ.
ಈ ಹಿಂದೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇದೇ ಕಾರ್ಖಾನೆಗೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಛೀಮಾರಿ ಹಾಕಿದ್ದರೂ, ಆಡಳಿತವರ್ಗದ ಕೂದಲೂ ಕೊಂಕಿಲ್ಲ. ಕಳೆದ ಒಂದು ತಿಂಗಳಲ್ಲಿ ಮಕ್ಕಳು ಆಚೆ ಆಟವಾಡುತ್ತಿದ್ದಾಗ ಕೊಠಡಿಯಲ್ಲಿ ಫé್ಯಾನ್ ಬಿದ್ದಿದೆ. ಒಂದೊಮ್ಮೆ ಆ ಸಮಯಕ್ಕೆ ಮಕ್ಕಳು ಒಳಗಿದ್ದಿದ್ದರೆ, ಭಾರೀ ಅನಾಹುತವೇ ನಡೆಯುತ್ತಿತ್ತು. ಇನ್ನೊಂದು ದಿನ ಹೊರಗಿನಿಂದ ಆಯಾ ಚಿಲಕ ಹಾಕಿಕೊಂಡು ಹೊರಗೆ ಹೋಗಿದ್ದಾಗ, ಮಕ್ಕಳು ಒಬ್ಬರ ಮೇಲೊಬ್ಬರು ಹತ್ತಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾರೆ. ಕೊನೆಗೆ ಬಾಗಿಲು ತೆರೆಯಲು 4 ಗಂಟೆ ಕಾಲ ಬೇಕಾಯಿತು. ಈ ಘಟನೆಗಳ ಹಿನ್ನಲೆಯಲ್ಲಿ ಆಡಳಿತ ವರ್ಗದ ನಿರ್ಲಕ್ಷ್ಯತನವನ್ನು ಗಮನಿಸಿದಾಗ ಹಾಗೂ ಪೋಲಿಸ್ ಠಾಣೆಗೂ ಮಾಹಿತಿಯನ್ನು ನೀಡದೆ, ಮಗುವಿನ ಶವಸಂಸ್ಕಾರ ನಡೆದಿರುವುದನ್ನು ನೋಡಿದರೆ ಈ ಬಗ್ಗೆ ಹಲವು ಸಂಶಯಗಳು ಕಾಡುತ್ತವೆ. ಮಕ್ಕಳನ್ನು ಕಟ್ಟಿಕೊಂಡ ದುಡಿಯುವ ತಾಯಂದಿರ ಆತಂಕಕ್ಕೆ ಕೊನೆಯೇ ಇಲ್ಲದಂತಾಗಿದೆ.
ಇತ್ತ ಮಹಿಳಾ ಕಾರ್ಮಿಕರರ ಹಿತದೃಷ್ಟಿಯಿಂದ ಯಾವುದೇ ಕ್ರಮ ಕೈಗೊಳ್ಳದೇ, ತಮ್ಮ ಬೊಕ್ಕಸ ತುಂಬುವ ಬಗ್ಗೆ ಹಿರಿಹಿರಿ ಹಿಗ್ಗುವ ಕಾರ್ಖಾನೆಯ ಮಾಲೀಕರು, ಕಣ್ಣಿದ್ದೂ ಜಾಣ ಕುರುಡುತನ ತೋರುವ ಬ್ರಾಂಡುಗಳು, ಇವುಗಳ ಅರಿವೇ ಇಲ್ಲದೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹವಣಿಸುವ ಸರ್ಕಾರಗಳ ಮಧ್ಯೆ ಇಂಥಹ ಅಸಂಖ್ಯ ಮಹಿಳಾ ಕಾರ್ಮಿಕರರು ದಿನಂಪ್ರತಿ ಒಂದಿಲ್ಲೊಂದು ಅಭದ್ರತೆಯಲ್ಲಿ ನಲುಗುತ್ತಲೇ ಇದ್ದಾರೆ.

No comments:

Post a Comment