13 Apr 2015

ಗಾರ್ಮೆಂಟ್ ಕಾರ್ಮಿಕರ ಬದುಕು-ಬವಣೆ (1)


ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ನೀರಿನ ಬವಣೆ…

ದೇಶದ ಆರ್ಥಿಕತೆಗೆ ಅತ್ಯಂತ ದೊಡ್ಡ ಕೊಡುಗೆಯನ್ನೇ ನೀಡುತ್ತಿರುವ ಬೆಂಗಳೂರಿನ ಗಾರ್ಮೆಂಟ್ಸ್ ಉದ್ಯಮದ ಯಶಸ್ಸಿನ ಹಿಂದೆ ಸುಮಾರು 5 ಲಕ್ಷಕ್ಕೂ ಅಧಿಕ ಸಂಖ್ಯೆಯ ಶ್ರಮಿಕ ವರ್ಗವಿದೆ. ಅದರಲ್ಲಿ ಶೇಕಡಾ 85% ಕಾರ್ಮಿಕರ ರು ಮಹಿಳೆಯರು ಎಂಬುದು ಗಮನಾರ್ಹ. ನಗರದ ಪೀಣ್ಯ ಕೈಗಾರಿಕಾ ಪ್ರದೇಶ, ಯಶವಂತಪುರ ಕೈಗಾರಿಕ ವಲಯ, ಬೊಮ್ಮನಳ್ಳಿ ಹಾಗೂ ಮೈಸೂರು ರಸ್ತೆಗಳಲ್ಲಿ ಇರುವ ಸುಮಾರು 1000ಕ್ಕೂ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ದುಡಿಯುವ ಈ ಮಹಿಳೆಯರು ಹೆಚ್ಚಿನ ವಿದ್ಯಾಭ್ಯಾಸವಿಲ್ಲದ, ಹಳ್ಳಿಗಳಿಂದ ವಲಸೆ ಬಂದಿರುವರಾಗಿದ್ದಾರೆ.
ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಲಗ್ಗೆರೆ, ರಾಜಗೋಪಾಲನಗರ, ಹೆಗ್ಗನಹಳ್ಳಿ, ಭೈರವೇಶ್ವರ ನಗರಗಳಲ್ಲಿ ಹೆಚ್ಚಾಗಿ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು ವಾಸಿಸುತ್ತಿದ್ದಾರೆ. ಬೆಳಿಗ್ಗೆ 8.30ಕ್ಕೆ ಕೆಲಸಕ್ಕೆಂದು ಹೊರಡುವ ಇವರು ಸಂಜೆ ಮನೆ ತಲುಪುವುದು 7 ಗಂಟೆ ನಂತರವೇ. ಈ ಪ್ರದೇಶಗಳಲ್ಲಿ ದೈನಂದಿನ ಬದುಕಿಗೆ ಅತ್ಯಗತ್ಯವಾದ ನೀರಿಗಾಗಿ ಬಹಳ ಪರಿಪಾಟಲು. ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆ ಸಮರ್ಪಕವಾಗಿಲ್ಲ. ಕೊಳಾಯಿಯೇ ಇಲ್ಲದ, ತುಕ್ಕು ಹಿಡಿದ ಪೈಪು, ನೀರು ಬಂದ ಕುರುಹೇ ಇಲ್ಲದ ಪರಿಸ್ಥಿತಿ ಇದ್ದು, ನೀರಿಗಾಗಿ ಹೆಚ್ಚಿದ ಹಾಹಾಕಾರ ಈ ಪ್ರದೇಶಗಳಲ್ಲಿ ಎದ್ದು ಕಾಣುತ್ತದೆ. ಆದರೆ ಕಾಲಾನುಕಾಲಕ್ಕೆ ಹೊಸದಾಗಿ ಬಣ್ಣ ಬಳಿಸಿಕೊಂಡು ಸ್ಥಳೀಯ ಕಾರ್ಪೋರೇಟರ್ ಹಾಗೂ ಶಾಸಕರ ಹೆಸರು ರಾರಾಜಿಸುವ ಖಾಲಿ ನೀರಿನ ಟ್ಯಾಂಕುಗಳು ಮಾತ್ರ ರಸ್ತೆಗೊಂದರಂತೆ ಬೆರ್ಚಪ್ಪನಂತೆ ನಿಂತಿವೆ. ಬಿಬಿಎಂಪಿಯವರು ಲಾರಿಯಲ್ಲಿ ವಾರಕ್ಕೊಂದೇ ದಿನ ನೀರು ಸರಬರಾಜು ಮಾಡುವುದು. ಇಡೀ ವಾರಕ್ಕೆ ಅಗತ್ಯವಾದ ಕುಡಿಯುವ ಹಾಗೂ ದಿನಬಳಕೆ ನೀರನ್ನು ಭಾನುವಾರದಂದು ಮಾತ್ರ ಹಿಡಿದಿಟ್ಟುಕೊಳ್ಳಬೇಕು. ಇನ್ನು ಬಿ.ಬಿ.ಎಂ.ಪಿಯ ಉಚಿತ ನೀರನ್ನು ಸರಬರಾಜು ಮಾಡುವ ಟ್ಯಾಂಕರ್ಗಾಗಿ ಜಾತಕಪಕ್ಷಿಗಳಂತೆ ಕಾಯಬೇಕು. ಪ್ರತಿ ಭಾನುವಾರ ನಿಗದಿತ ಸ್ಥಳಗಳಲ್ಲಿ, ಸಮಯಕ್ಕೆ ನೀರನ್ನು ಸರಬರಾಜು ಮಾಡಬೇಕೆಂಬ ಆದೇಶವಿದ್ದರೂ, ಸರಿಯಾದ ಸಮಯಕ್ಕೆ ಟ್ಯಾಂಕರ್ಗಳು ಬರುವುದಿಲ್ಲ. ಬಂದರೂ ಸಹ 10-20 ರೂಪಾಯಿಯನ್ನು ಡ್ರೈವರ್ಗೆ ಲಂಚ ನೀಡಲೇಬೇಕಾದ ಅನಿವಾರ್ಯತೆ. ಹಾಗೇ ನೀಡಿದರೂ 5 ಕೊಡ ಹಿಡಿಯುವುದರೊಳಗಾಗಿ ಏಳು ಕೆರೆ ನೀರುನ್ನು ನೋಡಿದ ಅನುಭವ. ಚಿಕ್ಕ ಚಿಕ್ಕ ಬೆಂಕಿಪೊಟ್ಟಣದಾಕಾರದ ಮನೆಗಳನ್ನು ಕಟ್ಟಿ ಕಾರ್ಮಿಕರಿಗೆ ನೀಡಿರುವ ಬಹುತೇಕ ಮನೆಮಾಲೀಕರು ಅಲ್ಲಿರುವ ಬಾಡಿಗೆದಾರರಿಗೆ ಕನಿಷ್ಠ ನೀರಿನ ವ್ಯವಸ್ಥೆ ಕಲ್ಪಿಸಿಯೇ ಇಲ್ಲ. ಈ ನೀರಿನ ಸಮಸ್ಯೆಯನ್ನೇ ಬಂಡವಾಳವಾಗಿಸಿ ಕೊಂಡ ಕೆಲವರು ಸೈಡ್ ಬಿಸಿನೆಸ್ ಮಾಡುತ್ತಿದ್ದಾರೆ. ಪ್ರತಿ ಕೊಡ ಕುಡಿಯುವ ನೀರಿಗೆ 2 ರೂಪಾಯಿಯಾದರೆ, ಪ್ರತಿ ಕೊಡ ದಿನಬಳಕೆ ನೀರಿಗೆ 1.50 ರೂಪಾಯಿ ವಸೂಲಿ ಮಾಡುತ್ತಾರೆ. ಹಾಗೆ ಹಣಕೊಟ್ಟು ಕೊಳ್ಳಲೂ ಸರತಿಯಲ್ಲಿ ಗಂಟೆಗಟ್ಟಲೆ ಕಾಯಲೇಬೇಕು. ತಿಂಗಳಿಗೆ ಸಿಗುವ 3 ಸಾವಿರ ಸಂಬಳದಲ್ಲಿ 700 ರೂಪಾಯಿಗಳನ್ನು ನೀರಿಗಾಗಿ ಮೀಸಲಿಡಬೇಕಾಗಿದೆ. ಸೈಕಲ್, ಆಟೋರಿಕ್ಷಾ ಮತ್ತು ಕಾಲ್ನಡಿಗೆಯಲ್ಲಿ ನೀರನ್ನು ಒಂದು-ಒಂದುವರೆ ಕಿ.ಮೀ.ಯಿಂದ ಹೊತ್ತು ತರಬೇಕಾಗಿದೆ. ಹೀಗೆ ಹೊತ್ತು ತರುವ ನೀರಿಗೂ ನಿಗದಿತ ಸಮಯವೆಂದೇನೂ ಇಲ್ಲ. ಬೆಳಿಗ್ಗೆ 8.30ರಿಂದ ಕೊಡ ಹಿಡಿದು ಕ್ಯೂನಲ್ಲಿ ನಿಂತರೆ, ನೀರು ಬಂದಾಗ ತುಂಬಿಕೊಳ್ಳಬೇಕು. ಒಂದು ದಿನ 9ಕ್ಕೆ ಬಿಟ್ಟರೆ, ಮತ್ತೊಂದು ದಿನ 12.. ಹೀಗೇ ನೀರನ್ನು ತುಂಬಿಸಿಕೊಳ್ಳುವ ಪರಿಪಾಟಲು. ಇಡೀ ವಾರದ ದೈಹಿಕ, ಮಾನಸಿಕ ಶ್ರಮವನ್ನೆಲ್ಲಾ ಕಳೆಯಬೇಕೆಂದಿದ್ದ ಭಾನುವಾರ ಇಂತಹ ಅನಿಶ್ಚಿತತೆಯಲ್ಲೇ ಕಳೆದು ಹೋಗುತ್ತದೆ.
ಈ ಪ್ರದೇಶಗಳಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಎಂದೂ ? ಕರ್ನಾಟಕದ ‘ಅಭಿವೃದ್ಧಿ’ಯ ಪತಾಕೆ ಜಾಹೀರಾತುಗಳಲ್ಲಿ ರಾರಾಜುಸುತ್ತಿದೆ. ನೀರಿನ ದಾಹ ತೀರಿಸಲು ಯೋಜನೆಗಳ ಸುರಿಮಳೆಯನ್ನು ಆಡಳಿತ ನಡೆಸುವವರು ಉದುರಿಸುತ್ತಿದ್ದಾರೆ. ರಾಜ್ಯದ ರಾಜಧಾನಿಯಲ್ಲೇ ನೀರಿಗೆ ಇಂತಹ ಪರಿಸ್ಥಿತಿ ಇರುವಾಗ ಇನ್ನು ಗ್ರಾಮಗಳ ಪರಿಸ್ಥಿತಿಯನ್ನು ಕೇಳುವವರು ಗತಿಯಿಲ್ಲ.
ದುಡಿಯುವ ವರ್ಗದ ದೈನಂದಿನ ಸಮಸ್ಯೆಗಳು ಹಲವಾರು. ಕಾರ್ಖಾನೆ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಸಮೂಹ ಚೌಕಾಸಿಯ ಮೂಲಕ ತಮಗೆ ಸಿಗಬೇಕಾದ ಹಕ್ಕು ಸವಲತ್ತುಗಳನ್ನು ಪಡೆಯಲು ಹೋರಾಟ ಮಾಡುವ ಅನಿವಾರ್ಯತೆಯೊಂದಿಗೆ, ಸಮಾಜದ ನಾಗರಿಕ ಬದುಕಿನಲ್ಲಿ ಹತ್ತು ಹಲವಾರು ಸವಾಲುಗಳನ್ನು ಎದುರಿಸ ಬೇಕಾಗಿದೆ.
ಆದರೆ ದುಡಿಯುವ ವರ್ಗವನ್ನು ಪ್ರತಿನಿಧಿಸುವ ಕಾರ್ಮಿಕ ಸಂಘಟನೆಗಳು ಈ ವರ್ಗದ ವೈಯ್ಯುಕ್ತಿಕ ಬದುಕಿನ ಸವಾಲು-ಪ್ರಶ್ನೆಗಳನ್ನು ಗಮನಿಸಲು ಅಥವಾ ಹೋರಾಟದ ಪರಿಧಿಯಲ್ಲಿ ತರಲು ತಯಾರಿಲ್ಲದಾಗಿವೆ.
ಇದರಿಂದಾಗಿ ಕಾರ್ಮಿಕರ ವರ್ಗದ ಹೋರಾಟ ಪ್ರಜ್ಞೆಯು ಕುಂಠಿತಗೊಂಡು ವೈಯ್ಯುಕ್ತಿಕ ಬದುಕಿನ ಸಮಸ್ಯೆಗಳನ್ನು ಸರಿತೂಗಿಸುವ ಜಂಜಾಟದಲ್ಲಿ ತಮ್ಮ ವರ್ಗ ಜವಾಬ್ದಾರಿಗಳತ್ತ ಮನಸ್ಸು ಹಾಯದಂತೆ ಈ ವ್ಯವಸ್ಥೆ ತಡೆಯೊಡ್ಡಿದೆ. ಈ ಮಿತಿಯನ್ನು ಮೀರಿ ಕಾರ್ಮಿಕ ಸಂಘಟನೆಗಳು ಕಾರ್ಯೋನ್ಮುಖವಾಗಿದೆ.

No comments:

Post a Comment